Introduction

ಪರಿಚಯ

ಪರಿಪೂರ್ಣ ರಂಗಭೂಮಿಯಾದ ಯಕ್ಷಗಾನದ ಅಧ್ಯಯನ, ಪ್ರಕಟನೆ, ಸಂವರ್ಧನೆ ಮತ್ತು ಸಂರಕ್ಷಣೆÂಗಾಗಿ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಅವರ ಆರ್ಥಿಕ ಅನುದಾನದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು 2009ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಯಕ್ಷಗಾನದ ವಿದ್ವಾಂಸರು, ಕಲಾವಿದರು, ಸಹೃದಯಿ ಪ್ರೇಕ್ಷಕರ ಅನುಸಂಧಾನದ ಮೂಲಕವೇ ಯಕ್ಷಗಾನ ಅಧ್ಯಯನ ಕೇಂದ್ರವನ್ನು ರೂಪಿಸಬೇಕೆಂಬುದು ಯಕ್ಷಗಾನ ಅಧ್ಯಯನ ಕೇಂದ್ರದ ಆಶಯವಾಗಿದೆ. ಯಕ್ಷಗಾನವನ್ನು ತೆಂಕು-ಬಡಗು ಅಥವಾ ಮೂಡಲಪಾಯ-ಪಡುವಲಪಾಯ ಎಂಬ ಸೀಮಿತ ಚೌಕಟ್ಟಿಗೊಳಪಡಿಸದೆ ಯಕ್ಷಗಾನದ ಇತರ ಸಂವಾದಿ ಕಲೆಗಳೂ ಒಳಗೊಳ್ಳುವಂತೆ ಎಲ್ಲವನ್ನೂ ಯಕ್ಷಗಾನದ ವಿಶಾಲ ವ್ಯಾಪ್ತಿಯೊಳಗೆ ತಂದು ಇದರ ಕುರಿತಂತೆ ಅಧ್ಯಯನ ಮತ್ತು ಸಂಗ್ರಹ, ಯಕ್ಷಗಾನಕ್ಕೆ ಸಂಬAಧಪಟ್ಟ ಪ್ರಚಾರೋಪನ್ಯಾಸಗಳು, ಪ್ರಾತ್ಯಕ್ಷಿಕೆ, ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುವುದು, ವಿಚಾರಸಂಕಿರಣಗಳು, ಕಾರ್ಯಾಗಾರ, ದಾಖಲಾತಿ, ಯಕ್ಷಗಾನದ ಕಲಿಕೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಮುಖ್ಯ ಆಕರವಾಗಬಲ್ಲ ಸುಸಜ್ಜಿತ ಯಕ್ಷವಾಙ್ಮಯ ಗ್ರಂಥಾಲಯದ ನಿರ್ಮಾಣ, ವ್ಯವಸ್ಥಿತವಾದ ಮತ್ತು ಅನನ್ಯವಾದ ವಸ್ತುಸಂಗ್ರಹಾಲಯದ ನಿರ್ಮಾಣ ಮತ್ತು ಆಡಿಯೋ – ವೀಡಿಯೋ ಸಿಡಿಗಳನ್ನು ಒಳಗೊಂಡ ಆರ್ಕೈವ್ ಮಾದರಿಯ ಸಂಗ್ರಹ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವುದು - ಇಂತಹ ಬಹುಮುಖಿ ಉದ್ದೇಶಗಳನ್ನು ಯಕ್ಷಗಾನ ಅಧ್ಯಯನ ಕೇಂದ್ರವು ಹೊಂದಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ.
ಯಕ್ಷಗಾನ ಅಧ್ಯಯನ ಕೇಂದ್ರದ ಕಾರ್ಯಸಾಧನೆಗಳು:
     ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಪರಿಪೂರ್ಣ ರಂಗಭೂಮಿಯಾದ ಯಕ್ಷಗಾನದ ಅಧ್ಯಯನ, ಪ್ರಕಟನೆ, ಸಂವರ್ಧನೆ ಮತ್ತು ಸಂರಕ್ಷಣೆÂಯ ಉದ್ದೇಶದಿಂದ ಆಸ್ತಿತ್ವಕ್ಕೆ ಬಂದಿದೆ. ಯಕ್ಷಮಂಗಳ ಪ್ರಚಾರೋಪನ್ಯಾಸಮಾಲಿಕೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ತಜ್ಞರಿಂದ ಹಲವು ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಿ ಮೌಲ್ಯಯುತ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಹಂಚುವ, ಯಕ್ಷಗಾನದ ಬಗ್ಗೆ ಆಸಕ್ತಿ ಹುಟ್ಟಿಸುವ ಕೆಲಸವನ್ನು ಮಾಡಿದೆ. ಯಕ್ಷಮಂಗಳ ಸಹಯೋಗಮಾಲಿಕೆಯಲ್ಲಿ ಕಮ್ಮಟ, ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಪ್ರದರ್ಶನ, ಯಕ್ಷಗಾನ ಸ್ಪರ್ಧೆ, ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ. ಯಕ್ಷಮಂಗಳ ಕೃತಿಮಾಲಿಕೆಯಲ್ಲಿ ಯಕ್ಷವಾಙ್ಮಯಕ್ಕೆ ಜ್ಞಾನ ಮತ್ತು ತಿಳುವಳಿಕೆಯನ್ನು ತುಂಬಬಲ್ಲ ಕೃತಿಗಳನ್ನು ಪ್ರಕಟಿಸುತ್ತಿದೆ. ಎಳೆಯ ಮಕ್ಕಳಿಗೆ ಯಕ್ಷಗಾನದ ಆಸಕ್ತಿಯನ್ನು ಬೆಳೆಸುವ ದೃಷ್ಟಿಯಿಂದ ಆಸುಪಾಸಿನ ಸ್ಥಳೀಯ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿಯನ್ನು ನೀಡಿ ಯಕ್ಷಮಂಗಳ ಮಕ್ಕಳ ತಂಡವನ್ನು ರೂಪಿಸಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಯಕ್ಷಮಂಗಳ ವೀಡಿಯೋ ಪ್ರದರ್ಶನದ ಮೂಲಕ ಮಕ್ಕಳಲ್ಲಿ ಹಾಗೂ ಆಸಕ್ತರಲ್ಲಿ ಯಕ್ಷಗಾನ ಪರಂಪರೆ ಹಾಗೂ ಕಲೆಯ ಬಗ್ಗೆ ತಿಳುವಳಿಕೆಯನ್ನು ಮೂಡಿಸಲಾಗುತ್ತಿದೆ. ಯಕ್ಷಗಾನದ ಭೌತಿಕ ಪರಿಕರಗಳ ಯಕ್ಷಮಂಗಳ ವಸ್ತುಸಂಗ್ರಹಾಲಯದ ವಿಸ್ತರಣೆ ಮಾಡಲಾಗಿದೆ. ಹಿರಿಯ ಯಕ್ಷಗಾನ ಸಾಧಕರಿಗೆ ಯಕ್ಷಮಂಗಳ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.