History and Evolution

ಇತಿಹಾಸ ಮತ್ತು ವಿಕಸನ

ಮಂಗಳೂರು ವಿಶ್ವವಿದ್ಯಾನಿಲಯ: ಮಂಗಳಗಂಗೋತ್ರಿಯು ಕರಾವಳಿಯ ಐತಿಹಾಸಿಕ ನಗರ ಮಂಗಳೂರಿನಿಂದ ಆಗ್ನೇಯ ದಿಕ್ಕಿನಲ್ಲಿ ಸುಮಾರು೨೦ಕಿ.ಮೀ ದೂರದಲ್ಲಿದೆ. ಸುತ್ತಮುತ್ತಲಿನ ಮೂರು ಜಿಲ್ಲೆಗಳ ವಿದ್ಯಾರ್ಥಿಗಳನ್ನು ಈ ವಿಶ್ವವಿದ್ಯಾನಿಲಯವು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದೆ. ವಿಶ್ವವಿದ್ಯಾನಿಲಯವು ಸುಮಾರು ೩೩೩ ಎಕರೆಗಳಷ್ಟು ವಿಶಾಲವಾದ ಜಾಗವನ್ನು ಹೊಂದಿದೆ. ಒಂದೆಡೆಯಿಂದ ಮೇಲ್ನೋಟಕ್ಕೆ ಅರಬ್ಬೀಸಮುದ್ರದ ಜೊತೆಗೂಡಿದ ನೇತ್ರಾವತಿ ನದಿಯ ಸೌಂದರ್ಯ ಕಂಡರೆ, ಇನ್ನೊಂದೆಡೆ  ಮುಗಿಲುಮುಟ್ಟುವ ಪಶ್ಚಿಮ ಘಟ್ಟಗಳ ಅಮೋಘ ಸೊಬಗನ್ನು ನೋಡಬಹುದು. ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರವಾಗಿ ಬೆಳೆದ ಮಂಗಳೂರು ವಿಶ್ವವಿದ್ಯಾನಿಲಯವು ೧೯೮೦ರಲ್ಲಿ ಸ್ವಾಯತ್ತಗೊಂಡಿತು. ಒಂದು ಕಾಲದಲ್ಲಿ ಕೇವಲ ಮೂರು ಸ್ನಾತಕೋತ್ತರ ಪದವಿ ವಿಭಾಗಗಳನ್ನು ಹೊಂದಿದ್ದ ಈ ವಿಶ್ವವಿದ್ಯಾನಿಲಯವು ಇದೀಗ ೨೫ ಸ್ನಾತಕೋತ್ತರ ಪದವಿ ವಿಭಾಗಗಳನ್ನು ಹೊಂದಿದೆ. ಈ ಎಲ್ಲ ಕಾಲೇಜುಗಳು ಉತ್ತಮ ಮೂಲಭೂತ ಸೌಕರ್ಯಗಳ ಜೊತೆಗೆ ಅನುಭವಿ ಹಾಗೂ ನುರಿತ ಉಪನ್ಯಾಸಕ ವೃಂದದವರನ್ನೂ ಹೊಂದಿವೆ. ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಎಲ್ಲ ರೀತಿಯ ಮೂಲಭೂತ ಅವಶ್ಯಕತೆಗಳನ್ನೂ ಪೂರೈಸುವುದರೊಂದಿಗೆ ಅವರ ಹೆಚ್ಚಿನ ವಿದ್ಯಾಭ್ಯಾಸಕ್ಕೂ ಅನುವು ಮಾಡಿಕೊಡುತ್ತಿದೆ. ನಮ್ಮ ವಿಶ್ವವಿದ್ಯಾನಿಲಯದ ಹಲವಾರು ಪ್ರಮುಖ ಸೌಲಭ್ಯಗಳಲ್ಲಿ ವಿಶಾಲವಾದ ಸುವಿಸ್ತಾರವಾದ ಆಧುನಿಕ ಗ್ರಂಥಾಲಯವೂ ಒಂದು. ಹಾಗೆಯೇ ಇಲ್ಲಿ ವೈಜ್ಞಾನಿಕ ಉಪಕರಣಗಳ ಕೇಂದ್ರ, ನೂತನ ಎಂ.ಬಿ.ಎ ವಿಭಾಗ, ಮೈಕ್ರೊಟ್ರಾನ್ ಕೇಂದ್ರ ಮತ್ತು ಅಂತರ್ಜಾಲ ಕೇಂದ್ರವೂ ಇದೆ. ವಿಶೇಷ ಹಾಗೂ ಆಕರ್ಷಕ ಆಡಳಿತ ಮಂಡಳಿಯ ಕಟ್ಟಡ,
 
ಅತಿಥಿಗಳಿಗೆ ಹಾಗೂ ಉದ್ಯೋಗಿಗಳಿಗಾಗಿ ಎರಡು ಅತಿಥಿಗೃಹ, ಖರೀದಿ ಮಳಿಗೆ, ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳು, ಎಟಿಎಂ ಕೇಂದ್ರ, ಅಂಚೆ ಕಛೇರಿ, ದೂರವಾಣಿ ಕೇಂದ್ರ ಎಲ್ಲವೂ ವಿಶ್ವವಿದ್ಯಾನಿಲಯದ ಆವರಣದ ಒಳಗೇ ಇದ್ದು ಸಹಕಾರಿಯಾಗಿದೆ. ಇದರೊಂದಿಗೆ ವಿಶ್ವವಿದ್ಯಾನಿಲಯವು ನೌಕರರಿಗೆ ಕ್ವಾಟರ್ಸ್ಗಳನ್ನೂ ಒದಗಿಸಿದೆ. ವಿಶ್ವವಿದ್ಯಾನಿಲಯದ ಆವರಣದ ಒಳಗೆ ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ಎರಡು ಪ್ರತ್ಯೇಕ ವಸತಿನಿಲಯಗಳಿವೆ. ಅಲ್ಲದೆ ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗಾಗಿ ವಸತಿನಿಲಯಗಳಿವೆ. ಈ ಎಲ್ಲ ವಸತಿನಿಲಯಗಳಲ್ಲೂ ಸೌರಶಕ್ತಿ ಆಧಾರಿತ ಬಿಸಿನೀರಿನ ವ್ಯವಸ್ಥೆಯಿದೆ. ಕ್ರೀಡಾಂಗಣಗಳು, ಆಧುನಿಕ ವ್ಯವಸ್ಥೆಯ ಜಿಮ್ನಾಸಿಯಂ ಸೌಲಭ್ಯಗಳಿವೆ. ಒಳಾಂಗಣ ಕ್ರೀಡೆಯ ವ್ಯವಸ್ಥೆಯೂ ಇದೆ. ಇಲ್ಲಿಯ ನೌಕರರು ವಿಶ್ವಮಂಗಳ ಎಂಬ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪದವಿಪೂರ್ವ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಲ್ಲದೆ ನೌಕರರ ಸಹಕಾರಿ ಸಂಘವನ್ನು ಸ್ಥಾಪಿಸಿ, ಅದರಿಂದ ವಿದ್ಯಾರ್ಥಿಗಳಿಗೆ ಮತ್ತು ನೌಕರರಿಗೆ ಅಪಾರ ಸಹಾಯವನ್ನು ನೀಡುತ್ತಿದ್ದಾರೆ. ಸುಮಾರು ೧೯೦ ಅಂಗ ಸಂಸ್ಥೆಗಳನ್ನು ಒಳಗೊಂಡಿದ್ದು, ಇದರ ಜೊತೆಗಿನ ಘಟಕ ಕಾಲೇಜುಗಳಾದ ಮಡಿಕೇರಿ ಹಾಗೂ ಮಂಗಳೂರಿನಲ್ಲಿರುವ ಕಾಲೇಜುಗಳು ೧೯೯೨ರಲ್ಲಿ ಸರಕಾರದ ಅಧೀನಕ್ಕೆ ಒಳಪಟ್ಟಿವೆ. ಮಡಿಕೇರಿಯ ಕಾವೇರಿ ಕ್ಯಾಂಪಸ್‌ನಲ್ಲಿ ಸ್ಥಾಪಿಸಿದ ಸ್ನಾತಕೋತ್ತರ ಕೇಂದ್ರವು ಸೂಕ್ಷ್ಮ ಶಾಸ್ತ್ರ ಜೀವಶಾಸ್ತ್ರ ಮತ್ತು ಜೈವಿಕ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ನೀಡುವುದರೊಂದಿಗೆ ಸಮಾಜದಲ್ಲಿ ಉತ್ತಮ ಹಾಗೂ ಪ್ರಭಾವೀ ಶಿಕ್ಷಣಸಂಸ್ಥೆಯಾಗಿ ಬೆಳೆದು ನಿಂತಿದೆ. ವಿಶ್ವವಿದ್ಯಾನಿಲಯವು ವಿದೇಶಗಳ ಅಂದರೆ ಅಮೇರಿಕಾ, ಫಿನ್‌ಲ್ಯಾಂಡ್, ಜಪಾನ್, ನಾರ್ವೆ, ಜರ್ಮನಿ, ಸ್ಪೇನ್, ಇಟಲಿ ದೇಶಗಳೊಂದಿಗೆ ವಿದ್ಯಾರ್ಥಿಗಳನ್ನು ಅಧ್ಯಯನದ ಉದ್ದೇಶದಿಂದ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನು ಹೊಂದಿದ್ದು, ಅವರ ಜೊತೆ ಆತ್ಮೀಯ ಸಂಬಂಧವನ್ನು ಹೊಂದಿದೆ. ಇಲ್ಲಿನ ಪ್ರಾಧ್ಯಾಪಕರು ಅನೇಕ ವಿದ್ಯಾರ್ಥಿವೇತನಗಳನ್ನು ಪಡೆಯುತ್ತಿದ್ದು, ಪಿಹೆಚ್.ಡಿ ಪದವಿಗಾಗಿ ಬೇರೆ ಬೇರೆ ವಿಶ್ವವಿದ್ಯಾನಿಲಯಗಳನ್ನು ಭೇಟಿಯಾಗುವ ಅವಕಾಶವನ್ನೂ ಪಡೆಯುತ್ತಿದ್ದಾರೆ. ಅವರು ಕಾಮನ್‌ವೆಲ್ತ್, ಹಂಬೋಲ್ಟ್ , ರೋಟರಿ, ಅಗತಾ ಹ್ಯಾರಿಸನ್ ಸ್ಮಾರಕ, ರಾಕ್‌ಫೆಲ್ಲರ್ ಮತ್ತು ಮಕಾರ್‌ತರ್ ಮೊದಲಾದ ವಿದ್ಯಾರ್ಥಿವೇತನಗಳನ್ನು ಪಡೆಯುವ ಮೂಲಕ ವಿಶ್ವವಿದ್ಯಾನಿಲಯವು ಜಾಗತೀಕರಣದ ಅನುಕೂಲತೆಗಳನ್ನು ಬಳಸಿಕೊಳ್ಳುತ್ತಿದೆ. ಇಂದು ವಿಶ್ವವಿದ್ಯಾನಿಲಯವು ಪರಿಸರದ ಬಗ್ಗೆ ಅಧ್ಯಯನ ಕೈಗೊಳ್ಳುವ ಮುಖ್ಯ ಕೇಂದ್ರವಾಗಿದೆ. ವಿಶ್ವವಿದ್ಯಾನಿಲಯದ ಕೆಲವು ಸಂಯೋಜಿತ ಕಾಲೇಜುಗಳು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ನೇರ ಸಂಪರ್ಕವನ್ನೂ ಹೊಂದಿದೆ. ಕೆಲವು ಹೊಸ ಅಧ್ಯಯನ ವಿಷಯಗಳನ್ನು ದೇಶದಲ್ಲೇ ಪ್ರಥಮವಾಗಿ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಲಾಗಿದೆ. ಹೊಟೇಲ್ ಮ್ಯಾನೇಜ್‌ಮೆಂಟ್, ಮಾನವ ಸಂಪನ್ಮೂಲ ಅಭಿವೃದ್ಧಿ ಶಿಕ್ಷಣ ವಿಭಾಗ, ಫ್ಯಾಷನ್ ಡಿಸೈನ್ ಮತ್ತು ಯೋಗ ವಿಜ್ಞಾನದಂತಹ ವಿಷಯಗಳನ್ನು ವಿಶ್ವವಿದ್ಯಾನಿಲಯದಲ್ಲೇ ಮೊದಲಿಗೆ ಆರಂಭಿಸಲಾಯಿತು. ಇವುಗಳು ದೇಶೀಯ ಹಾಗೂ ವಿದೇಶೀಯ ವಿದ್ಯಾರ್ಥಿಗಳನ್ನೂ ಆಕರ್ಷಿಸಿವೆ. ಆಡಳಿತಾತ್ಮಕ ಕೆಲಸಗಳನ್ನು ಶೀಘ್ರವಾಗಿ ಮಾಡುವ ಉದ್ದೇಶದಿಂದ ಆಡಳಿತ ಕಛೇರಿಯನ್ನು ಗಣಕೀಕರಣಗೊಳಿಸಲಾಗಿದೆ. ಎಲ್ಲ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲೂ ಗಣಕಯಂತ್ರ, ಅಂತರ್ಜಾಲ ವ್ಯವಸ್ಥೆ ಹಾಗೂ ದೂರವಾಣಿ ಸಂಪರ್ಕಗಳನ್ನೂ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರವನ್ನು ಗಣಕೀಕರಣಗೊಳಿಸಿರುವುದರಿಂದ ಕ್ಲುಪ್ತ
 

ಸಮಯದಲ್ಲಿ ಪರೀಕ್ಷೆಗಳನ್ನು ನಡೆಸಲು ಹಾಗೂ ಪರೀಕ್ಷಾ ಫಲಿತಾಂಶಗಳನ್ನು ಒದಗಿಸಲೂ ಸಾಧ್ಯವಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಜಲತಾಣವನ್ನೂ ನಿರ್ಮಿಸಲಾಗಿದ್ದು, ಎಲ್ಲ ಕಾಲೇಜುಗಳು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಮಾಹಿತಿಗಳನ್ನು ಆ ಮೂಲಕ ಪಡೆಯಬಹುದಾಗಿದೆ. ವಿವಿಧ ಅರ್ಜಿಗಳು, ಪ್ರವೇಶಾತಿ ಮತ್ತು ಫಲಿತಾಂಶಗಳ ವಿವರಗಳನ್ನು ಇಲ್ಲಿ ಪಡೆಯಬಹುದಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯವು ಶಿಸ್ತು ಮತ್ತು ಸಮಯಪಾಲನೆಗೆ ಹೆಸರುವಾಸಿಯಾಗಿದ್ದು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಪರೀಕ್ಷೆಗಳು ಇಲ್ಲಿ ಸಮಯಕ್ಕೆ ಸರಿಯಾಗಿ ನಡೆಯುತ್ತವೆ. ಯುಜಿಸಿಯ ನಿಯಮದಂತೆ ೧೮೦ ಕೆಲಸದ ದಿನಗಳನ್ನೂ ಪೂರ್ಣಗೊಳಿಸುತ್ತದೆ. ಸುಮಾರು ೪೧೧ ಜನ ತಮ್ಮ ಪಿಹೆಚ್.ಡಿ ಪದವಿಗಾಗಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರೆ ಪ್ರಾಧ್ಯಾಪಕರು ತಮ್ಮ ಪಾಠ-ಪ್ರವಚನಗಳ ಜೊತೆಗೆ ಸಕ್ರಿಯವಾಗಿ ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯವು ಯುಜಿಸಿ, ಡಿಎಸ್‌ಟಿ, ಕರ್ನಾಟಕ ಸರಕಾರ, ಸಾಗರ ಅಭಿವೃದ್ಧಿ ಇಲಾಖೆ, ವಿದ್ಯುನ್ಮಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬಾಹ್ಯಾಕಾಶ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ಪರಮಾಣು ಇಲಾಖೆ ಮತ್ತು ಇತರ ಸಂಸ್ಥೆಗಳಿಂದ ಅನುದಾನವನ್ನು ಪಡೆದಿದೆ. ಇದು ವಿಶ್ವವಿದ್ಯಾನಿಲಯಕ್ಕೆ ದೇಶ-ವಿದೇಶದಲ್ಲಿ ಪ್ರಸಿದ್ಧಿಯನ್ನು ತಂದುಕೊಟ್ಟಿದೆ.

ಬ್ಯಾಂಕುಗಳ ನಿರ್ವಹಣೆ, ಯೋಗ, ಆಯುರ್ವೇದ, ಕನಕದಾಸ ಅಧ್ಯಯನ, ಸಂಸ್ಕೃತ ಸಾಹಿತ್ಯ, ಸಾಹಿತ್ಯ ವಿಮರ್ಶೆ, ಕ್ರೈಸ್ತ ಧರ್ಮ, ಗ್ರಾಮೀಣ ಅಭಿವೃದ್ಧಿ, ಪರಿಸರ ಮತ್ತು ಪರಿಸರ ವಿಜ್ಞಾನ, ತುಳು ಭಾಷೆ-ಸಾಹಿತ್ಯ, ಸಂಸ್ಕೃತಿ, ದೃಶ್ಯ ಮತ್ತು ಕಲಾ ಮಾಧ್ಯಮಗಳ ಅಭಿವೃದ್ಧಿಯನ್ನು

.ಅಧ್ಯಯನ ಮಾಡುವ ಉದ್ದೇಶದಿಂದ ವಿಶ್ವವಿದ್ಯಾನಿಲಯವು ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಕನಕದಾಸ ಸಂಶೋಧನ ಕೇಂದ್ರ, ಯಕ್ಷಗಾನ ಅಧ್ಯಯನ ಕೇಂದ್ರ, ಅಂಬಿಗರ ಚೌಡಯ್ಯ ಪೀಠ ಮೊದಲಾದ ದತ್ತಿ ಪೀಠಗಳನ್ನು ಸ್ಥಾಪಿಸುವ ಮೂಲಕ ಅವರ ತತ್ವ  ಮತ್ತು ಪ್ರಸ್ತುತತೆಯನ್ನು ಅಧ್ಯಯನ ಮಾಡುವ ಕೆಲಸವನ್ನು ಮಾಡುತ್ತಿದೆ. ಈ ದತ್ತಿ ಪೀಠಗಳು ವಿಶ್ವವಿದ್ಯಾನಿಲಯವು ಸಮಾಜದೊಡನೆ ತನ್ನ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳಲು ಸಹಕರಿಸುತ್ತಿವೆ.

ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ದೂರ ಶಿಕ್ಷಣದ ಮೂಲಕ ಅವಕಾಶ ಕಲ್ಪಿಸುವ ಮೂಲಕ ವಿಶ್ವವಿದ್ಯಾನಿಲಯವು ಅನೇಕ ವಿದ್ಯಾರ್ಥಿಗಳಿಗೆ ಸಹಾಯಹಸ್ತವನ್ನು ಚಾಚಿದೆ. ಇದು ಅನೌಪಚಾರಿಕ ಶಿಕ್ಷಣಕ್ರಮದ ಮೂಲಕ ದೂರ ಶಿಕ್ಷಣದ ಮಾದರಿಯಲ್ಲಿ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುತ್ತದೆ. ಬೇರೆ ಬೇರೆ ಕಾರಣಗಳಿಗಾಗಿ ಔಪಚಾರಿಕ ಶಿಕ್ಷಣವನ್ನು ಪಡೆಯಲಾಗದ ಆಸಕ್ತರಿಗೆ ಓದುವ ಅವಕಾಶವನ್ನು ಕಲ್ಪಿಸುವುದೇ ಇದರ ಹಿಂದಿರುವ ಉದ್ದೇಶ.ಇತ್ತೀಚೆಗೆ ಹೊಸತಾಗಿ ಒಂದು ಆರೋಗ್ಯ ಮತ್ತು ಅಪಘಾತ ವಿಮೆಯ ಸೌಲಭ್ಯವನ್ನು ಕೂಡ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾಗಿದ್ದು.

 ಇದು ಅಪಘಾತಕ್ಕೊಳಗಾದ ವಿದ್ಯಾರ್ಥಿಗಳ ವೈದ್ಯಕೀಯ ವೆಚ್ಚವನ್ನು ಭರಿಸುವ ಮೂಲಕ ಆರ್ಥಿಕವಾಗಿ ಸಹಾಯವನ್ನು ಮಾಡುತ್ತದೆ. ಐಎಎಸ್/ಐಪಿಎಸ್ ತರಬೇತಿ ಕೇದ್ರವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಮತ್ತು ಸಂಘಟನೆ ಮಂತ್ರಾಲಯದ ಸಹಕಾರದೊಂದಿಗೆ ಆರಂಭಿಸಲಾಗಿದೆ. ಇಂತಹ ಹೊಸ ಯೋಜನೆಗಳು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಲಭ್ಯತೆಯನ್ನು ಹೆಚ್ಚು ಪರಿಪೂರ್ಣ ಮತ್ತು ಅರ್ಥಪೂರ್ಣವಾಗಿಸಿವೆ.

ಪ್ರತಿಷ್ಠಿತ ತಜ್ಞರು ಮತ್ತು ಕಲಿಕೆಯ ಕೇಂದ್ರಗಳಿಂದಾಗಿ ವಿಶ್ವವಿದ್ಯಾನಿಲಯವು ಭಾರತದ ಶೈಕ್ಷಣಿಕ ಭೂಪಟದಲ್ಲಿ ಗೌರವದ ಸ್ಥಾನವನ್ನು ಪಡೆದಿದೆ. ಅಲ್ಲದೆ ವಿಶ್ವವಿದ್ಯಾನಿಲಯದ ಅನೇಕ ಹಳೆ ವಿದ್ಯಾರ್ಥಿಗಳು ದೇಶ ಹಾಗೂ ವಿದೇಶದಲ್ಲಿ ಗೌರವಯುತ ಸ್ಥಾನವನ್ನು ಹೊಂದುವ ಮೂಲಕ ವಿಶ್ವವಿದ್ಯಾನಿಲಯಕ್ಕೆ ಹೆಮ್ಮಯನ್ನು ತಂದಿದ್ದಾರೆ. ಕಳೇದ ಕೆಲವು ವರ್ಷಗಳಿಂದೀಚೆಗೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಭವಿಷ್ಯದ ಒಳಿತನ್ನೇ ತನ್ನ ಆಶಯವನ್ನಾಗಿರಿಸಿಕೊಂಡ ಮಂಗಳೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಾ ಬದಲಾವಣೆಯ ಹರಿಕಾರನಾಗಿ ತನ್ನ ಗುರಿ ಮತ್ತು ಧ್ಯೇಯವನ್ನು ತಲುಪುವಲ್ಲಿ ಶ್ರಮಿಸುತ್ತಿದೆ.